ಎಕ್ಬತಾನ

	ಇರಾನಿನಲ್ಲಿ ಈಗಿನ ಹ್ಯಾಮದ್ಯಾನ್ ಪಟ್ಟಣವಿರುವಲ್ಲಿಯೇ ಇದ್ದ ಒಂದು ಪ್ರಾಚೀನ ನಗರ. ಪೂರ್ವ ಪರ್ಷಿಯನ್ ಭಾಷೆಯಲ್ಲಿ ಇದಕ್ಕೆ ಹಂಗ್ಮತಾನ ಎಂದರೆ ಸಭೆ ಸೇರುವ ಸ್ಥಳ ಎಂಬ ಅರ್ಥವಿತ್ತು. ಮೀಡಿಯದ ಮೊದಲ ದೊರೆ ಡೀಓಸೆಸ್ (ಕ್ರಿ.ಪೂ. 8-7ನೆಯ ಶತಮಾನ) ಇದನ್ನು ಕಟ್ಟಿದನೆಂದು ಗ್ರೀಕ್ ಚರಿತ್ರಕಾರರ ಹೇಳಿಕೆ. ಆದರೆ ಇತ್ತೀಚೆಗೆ ಈ ಊರಿನ ಸಮೀಪದ ಕೆಲವು ಬಂಡೆಗಳ ಮೇಲೆ ಅಕಾಡಿಯನ್ನರ ಕಾಲದ ಕೆಲವು ಉಬ್ಬುಶಿಲ್ಪಗಳು ಬೆಳಕಿಗೆ ಬಂದಿರುವುದರಿಂದ, ಮೀಡರ ಕಾಲಕ್ಕೆ ಹಿಂದಿನಿಂದಲೂ ಇಲ್ಲಿ ವಸತಿಯಿತ್ತೆಂದು ಹೇಳಬಹುದಾಗಿದೆ. ಮೊದಲು ಇದು ಮೀಡರ ರಾಜಧಾನಿಯಾಗಿತ್ತು. ಕ್ರಿ.ಪೂ. 550ರಲ್ಲಿ ಅಖಮೇನಿಯ ವಂಶದ ದೊರೆ ಸೈರಸ್ ಇದನ್ನು ವಶಪಡಿಸಿಕೊಂಡ ಮೇಲೆ ಕ್ರಿ.ಶ. 330 ರಲ್ಲಿ ಅಲೆಕ್ಸಾಂಡರನ ಕೈಸೇರುವವರೆಗೂ ಇದನ್ನು ಅಖಮೇನಿಯ ದೊರೆಗಳು ತಮ್ಮ ಬೇಸಗೆಯ ರಾಜಧಾನಿಯಾಗಿ ಮಾಡಿಕೊಂಡಿದ್ದರು. ಅನಂತರ ಪಾರ್ಥಿಯನ್ನರ ಕಾಲದಲ್ಲೂ ಅವರ ರಾಜಧಾನಿಗಳಲ್ಲೊಂದಾಗಿತ್ತು. ಅಖಮೇನಿಯ ರಾಜವಂಶದ ಡೇರಿಯಸ್ ಮತ್ತು ಅರ್ತಾಸರ್‍ಕ್ಸೀಸರ ಶಾಸನಗಳು ಇಲ್ಲಿ ದೊರಕಿವೆ.

	ಹೀರಡಟಸ್ ಮತ್ತು ಪಾಲಿಬಿಯಸರು ಈ ನಗರವನ್ನು ವರ್ಣಿಸಿದ್ದಾರೆ. ನಗರದ ಸುತ್ತಲೂ ಏಳು ಸುತ್ತಿನ ಕೋಟೆ ಇದ್ದು ಮಧ್ಯದಲ್ಲಿ ದೊಡ್ಡ ಪ್ರಮಾಣದ ಅರಮನೆ ಇದ್ದಿತಂತೆ. ಅದನ್ನು ಐಶ್ವರ್ಯಾಗಾರವಾಗಿಯೂ ಬಳಸುತ್ತಿದ್ದರಂತೆ. ಈಗದು ಅಲ್ಪ ಪ್ರಮಾಣದಲ್ಲಿ ಪಳೆಯುಳಿಕೆಯಾಗಿ ನಿಂತಿದೆ.								
 (ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ